Tuesday, September 30, 2008

ಪ್ರೇಮ ಕಂಪನ


ಬಾಳಪುಟದಿ ಬರೆದಾಯ್ತು ನಿನ್ನ ಹೆಸರು
ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು

ಗೆಳೆಯಾ ಆ ನಿನ್ನ ನಗುವು
ಮರೆಯಲಾಗದು ಎಂದೂ ನನಗೆ
ನಿನ್ನ ಕೈಗಳ ಸ್ಪರ್ಶದ ಸುಖವು
ಸದಾ ಬೇಕೆನಿಸುವುದು ಎನಗೆ

ಅದು ಹೇಗೋ ಗೊತ್ತಿಲ್ಲ ಕಣೋ
ನೀ ನನ್ನೆದೆ ಸೇರಿದ ಸಮಯ
ನನಗಷ್ಟೇ ಬೇಕು ಕಣೋ
ನಿನ್ನ ಪ್ರೇಮದ ಸವಿರುಚಿಯ

ಹೇ ನಲ್ಲನೇ, ಇದೋ ನೀಡುವೆ
ಈಗಲೇ ನನ್ನ ಈ ತನುಮನ
ಸದಾ ಎಂದೆಂದಿಗೂ ಕಾಯುವೆ
ಪಡೆಯಲು ನಿನ್ನೆದೆಯ ಪ್ರೇಮಕಂಪನ

ಹಟ್ಟಿ ಉತ್ಸವ

ಹಟ್ಟಿಗೆ ಹೋಗೋಣ ನಾವು
ತಿಪ್ಪೇಶನ ಜಾತ್ರೆಗೆ ಹೋಗೋಣ

ಎತ್ತಿನ ಬಂಡಿಯ ಮೇಲೆ
ಎಲ್ಲರೂ ನಾವು ಏರಿ
ಸರಸರ ಹೆಜ್ಜೆಯನ್ನಿಕ್ಕುತ್ತಿದೆ
ಸಿಂಗರಿಸಿದ ನಮ್ ಹೋರಿ

ನೋಡಣ್ಣಾ ಅಲ್ಲಿದೆ
ಮುಗಿಲೆತ್ತರದಾ ತೇರು
ನಾಯಕನಹಟ್ಟಿ ಶ್ರೀ ಗುರು
ತಿಪ್ಪೇಶನ ಜಾತ್ರೆ ಬಲುಜೋರು

'ಮಾಡಿದಷ್ಟು ನೀಡು ಭಿಕ್ಷೆ'ಯ
ಕಾಯಕಯೋಗಿಯು ನೀನು
ಎಲ್ಲರನು ನೀ ಸಲಹಯ್ಯ
ಎಂದು ನಾ ನಿನ್ನ ಬೇಡುವೆನು

ಒಲುಮೆಗಾಗಿ...


ನನ್ನೆದೆಯ ಬಾನಲ್ಲಿ, ತಿಂಗಳ ಬೆಳಕು ನೀನು
ನನ್ನ ಕನಸಿನ ರಾಣಿಯಾಗಿ ಕಾಡಿದವಳು ನೀನು

ನನ್ನ ಕಣ್ಣಲಿ ಪ್ರತಿ ಕನಸು ನಿನಗಾಗಿ ಕಣೇ
ನನ್ನೆದೆಯಲಿ ಅರಳುವ ಪ್ರೀತಿ ನಿನಗಾಗಿ ಕಣೇ
ನಿನ್ನ ಮನದಾಳದ ಪ್ರೀತಿ ನನಗೆ ಬೇಕು ಕಣೇ
ನಿನ್ನ ಅದರಗಳ ಸಿಹಿಜೇನು ನನಗಾಗಿಯೇ ಕಣೇ

ಇಷ್ಟುದಿನದ ಕನಸಲಿ, ಕಾಡಿದ್ದು ನೀನೇನಾ?
ನಾ ತಬ್ಬುವಷ್ಟರಲ್ಲಿ ಮಾಯವಾದದ್ದು ನೀನಾ?
ತಿಂಗಳ ರಾತ್ರಿಯಲಿ ಎದೆಮೇಲೆ ಮಲಗಿದ್ದು ನೀನಾ?
ಇಷ್ಟುದಿನದ ಸಖ್ಯತೆಯಲಿ, ಏನೂ ಗುರುತಿಸಲಿಲ್ಲ ನಾ

ಆ ಎಲ್ಲಾ ಕನಸುಗಳ ನನಸಾಗಿಸು ಚೆಲುವೆ
ಎಳ್ಳಷ್ಟೂ ಬೇಡ ಕಣೆ, ಈ ಜಗದ ಗೊಡವೇ
ಕೊನೆಕ್ಷಣದ ಉಸಿರಿರೊವರೆಗೆ ನಾ ಪ್ರೀತಿಸುವೆ
ನವದಂಪತಿಗಳಾಗುವ ಸಮಯಕೆ ನಾ ಕಾಯುವೆ

ಹುಡುಗಿಯರೇ ಹೀಗೇ...!


ಹುಡುಗಿಯರೇ ಹೀಗೆ, ಅದೇಕೋ ಗೊತ್ತಿಲ್ಲ
ಎಲ್ಲರಂತೆ ಇರಲು ಅವರಿಗೇಕೆ ಆಗುವುದಿಲ್ಲ

ತಾವೇ ಕಟ್ಟಿದ ಕೋಟಿ ಕನಸುಗಳ ನಡುವೆ
ಸಿಲುಕಿ, ಜೇಡದಂತೆ ಬಿದ್ದು ಒದ್ದಾಡುವರಲ್ಲ
ಗರಗಸದಂತೆ ಕೊರೆವ ಕಹಿನೆನಪುಗಳ ನಡುವೆ
ಆ ನೆನಪ ಸುನಾಮಿ ಅಲೆಯಿಂದ ತತ್ತಿರಿಸುವರಲ್ಲ

ತನ್ನೆದೆಯ ಮಡಿಲಿನಲಿ ದುಃಖಸಾಗರವೇ
ಭೋರ್ಗರೆಯುತ್ತಿದ್ದರೂ ನಗುತಾ ನಲಿಯುವರಲ್ಲ
ತಾವೇ ತೆರೆದಿಟ್ಟ ಕಲ್ಪನೆಗಳ ದರ್ಪಣವೇ
ಚೂರಾದರೂ, ನೋವನುಂಗಿ ಸುಮ್ಮನಾಗುವರಲ್ಲ

ತಾವೇನೆ ಮಾಡಿದರೂ, ಒಲವಿಗೋಸ್ಕರವೇ
ತಮಗಾಗಿ ಎಂದೂ ಏನೂ ಬಯಸಿದವರಲ್ಲ
ಗೆಳೆಯನೇ ಗೊತ್ತಾ? ಹುಡುಗಿಯರ ಗೊಡವೆ
ಅದ್ಯಾಕೆ ಅವರು ಹೀಗೆ, 'ಆ ದೇವರೆ ಬಲ್ಲ'

ಓ ನನ್ನ ಗೆಳೆಯಾ

ನಿನಗೆ ನಾನು ಅದು ಹೇಗೆ ಹೇಳಲಿ ಗೆಳೆಯಾ
ನಿನ್ನ ಕಾಣದೇ ನಾ ಪಡುವ ವಿರಹದ ವ್ಯಥೆಯಾ

ನನ್ನೀ ಕಣ್ಗಳು ಕಾದಿವೆ, ಚೆಲುವನೇ ನಿನ್ನ ಕಾಣಲು
ಮಹದಾಸೆಯ ಭಾವದಿ ನಿನಗಾಗಿ ನಾ ಕಾದಿರಲು
ನೀ ಬಂದು ನನಗಾಗಿ ನನ್ನ ಸನಿಹ ಸೇರಲು
ಆಗ ಚಿಮ್ಮುವುದೆನ್ನ ಮನದಿ ಸಂತಸದ ಹೊನಲು

ಬರೀ ಎರಡು ದಿನಗಳಿಂದಷ್ಟೇ ನಿನ್ನ ಕಾಣದಾಗಲಿಲ್ಲ
ಕ್ಷಣಕಾಲ ನಿನ್ನ ಕಾಣದಾದರೆನಗೆ ಬದುಕಲಾಗುವುದಿಲ್ಲ
ಯಾವ ನಾರಿಯ ಚಿತ್ತದಲಿ ಇರಬೇಕಾದುದು ನೀನಲ್ಲ
ಅದ್ಹೇಗೋ ಕಾಣೇ, ಈ ನನ್ನ ಮನಸಿಗೆ ನೀ ನಲ್ಲ

ಕಣ್ಣುಮುಚ್ಚಿ ಕುಳಿತರೆ ಸಾಕು ನಿನ್ನದೇ ನೆನಪು
ನಿನ್ನ ನೆನೆದಾಗಲೇ ಕಣ್ಗಳಲಿ ತುಂಬುದು ಹೊಳಪು
ನಿಜಕ್ಕೂ ಈ ಮನದಿ ಅಚ್ಚಳಿಯದಿದೆ ನಿನ್ನ ಛಾಪು
ಸಖನೇ ನಿನ್ನ ನಗುಮೊಗವೇ ಈ ಪ್ರೀತಿಗೆ ಹುರುಪು

ಬೆಳಗು

ಉದಯಿಸಿದ ರವಿ ಮೂಡಣದಿ, ರವಿ ಉದಯಿಸಿದ
ತಾ ಕೆಂಪೇರುತ, ಹೊನ್ನಕಿರಣಗಳ ತಾನು ಹರಡಿಸಿದ

ಆ ಸೂರ್ಯನ ಕಿರಣಗಳು ಭುವಿಗೆ ತಾಕಿರಲು
ಮಂಜಿನ ಹನಿಗಳು ಕರಗಿ ಭುವಿಯ ಸೇರಿರಲು
ಹಕ್ಕಿಗಳೆಲ್ಲಾ ಚಿಲಿಪಿಲಿ ಎನ್ನುತಾ, ಸದ್ದನು ಮಾಡಲು
ನಿಜಕ್ಕೂ ಇದು ಭಾಸ್ಕರನ ಸಂತೋಷದ ಹೊನಲು

ಮೆಲ್ಲನೇ ಓಡಿ ಹೋಗುವಂತೆ, ಮಂಜು ಜಾರುತಿದೆ
ಆಗಸಕೆ ಬಂಗಾರದ ಲೇಪನವನು ಮಾಡಿದಂತಿದೆ
ಹಸಿರಿನ ನಡುವೆ ಬೆಳ್ಳಿಧೂಪವು ಹೊಗೆಯಾಡುತಿದೆ
ಇಡೀ ವನವೆಲ್ಲಾ ಮಂಜಿನಲಿ ತೋಯ್ದು ನಿಂತಂತಿದೆ

ಈ ಮುಂಜಾವಿನಲಿ ಈಗಷ್ಟೇ ಅರಳಿದ ಹೂಗಳು
ಈ ರಮಣೀಯತೆಯನು ನೋಡಿ ತಣಿದಿದೆ ಕಣ್ಗಳು
ಇದೆಲ್ಲಾ ಯಾವ ಕಲೆಗಾರನ ಸುಂದರ ಕನಸುಗಳು
ನಿಜಕ್ಕೂ ಆ ಕಲೆಗಾರನಿಗೆ ನನ್ನ ಕೋಟಿ ನಮನಗಳು

ಭಾವಾಂಗಿನಿ

ಕನಸಲಿ ಬಂದು ಕಾಡುವ ಹೃದಯವೇ, ನೀನೆಲ್ಲಿರುವೆ
ಮನದ ಭಾಷೆ, ಎದೆಯಾಳದ ಕನಸು ನೀನಾಗಿರುವೆ

ಹೃದಯವೇ ಓ ಹೃದಯವೇ ನೀ ಹೇಗಿರುವೆ
ನನ್ನ ಕನಸಿನ ಪ್ರತಿಬಿಂಬವಾಗಿ ಅರಳಿದ ಕುಸುಮವೇ
ನಿನ್ನನು ಪ್ರತಿದಿನವೂ ನಾ ನೆನೆಯುತಲಿರುವೆ
ನನ್ನೆದೆಯಲಿ ಜೇನಹೊಳೆಯಲಿ ನೆಲೆಸಿಹ ಜೀವವೆ

ನನ್ನ ಕನಸಿನ ಕಣ್ಗಳ ಪ್ರತಿಬಿಂಬವು ನೀ
ನನ್ನೆದೆ ನೆನಪಿನಲಿ ಅರಳಿದ ಹೂವು ಕಣೆ ನೀ
ನಿನ್ನ ಪ್ರೀತಿಯನು ಪಡೆದಿಹ ನಾ ಚಿರಋಣಿ
ಈ ಕನಸಿನ, ನನಸಿನ ಭಾವದ ಭಾವಾಂಗಿನಿ

ಮನದ ಆಸೆಗಳೆಲ್ಲ ನಿನ್ನೊಡನೆ ನಾ ಹೇಳಲು
ಬಹಳ ದಿನದಿಂದ ಕಾಯುತಿದೆ ಈ ಒಡಲು
ಕಾತರಿಸುತಿದೆ ಈ ಜೀವ, ನಿನ್ನನು ಸೇರಲು
ಸಹಕರಿಸು ಚೆಲುವೆ, ನಿನ್ನ ಮನ ಬೆರೆಯಲು

ಕನ್ನಡ ಜನತೆ


ಹೇ ಭಾರತಾಂಬೆ, ಎಲ್ಲಿದೆ ಕರುನಾಡು ನಿನ್ನ ಕೋಪದಲಿ
ಅದೆಂದೋ ಮುಳುಗಿದೆ ನಿನ್ನ ಪ್ರೀತಿಯ ಕಡಲಲಿ

ಎಲ್ಲಿದ್ದರೂ ಜನಾ ಮುಗ್ಧರು, ನಮ್ಮ ಈ ಕನ್ನಡಿಗರು
ಪ್ರೀತಿ-ಪ್ರೇಮದ ರಜತಮೂರ್ತಿಗಳು ಈ ಜನರು
ಶಾಂತಿ-ಸೌಹಾರ್ದತೆಯ ನವಪ್ರತಿಮೆಗಳು ಇವರು
ಕನ್ನಡಮ್ಮನ ಮಕ್ಕಳು ಈ ಕೆಚ್ಚೆದೆಯ ರಣಧೀರರು

ಶಾಂತಿಗೆ ಸಾಕ್ಷಿ, ಕರ್ನಾಟಕದ ರಮ್ಯತಾಣಗಳು
ಅವನ ಧೈರ್ಯಕ್ಕೆ ಹೆಗ್ಗುರುತು ಐತಿಹಾಸಿಕ ಸ್ಥಳಗಳು
ಪ್ರತಿ ಕನ್ನಡಿಗರೂ ಸಹ, ವೀರ ಗಂಡುಗಲಿಗಳು
ಕನ್ನಡತಿಯರೆಲ್ಲರೂ ಹೊಳೆವ ಬಂಗಾರದ ಶಿಲ್ಪಿಗಳು

'ಕಾಯಕವೇ ಕೈಲಾಸ'ವೆಂಬ ಧರ್ಮ ಅವರದು
ಎಲ್ಲರೊಡನೆ ಬೆರೆತು ಬಾಳುವ ಭಾವ ಇವರದು
ಸುವರ್ಣ ಇತಿಹಾಸವಿದೆ, ಕರುನಾಡ ರಾಜರದು
ಸದ್ಗುಣವಂತರಿಂದ ಪ್ರಶಂಸಿದ ಭಾವ ಕನ್ನಡಿಗರದು

ಶ್ರೀ ಧನಲಕ್ಷ್ಮಿ

ಆಗಮಿಸು ತಾಯೇ, ನೀನು ನಮ್ಮ ಮನೆಗೆ
ಶ್ರೀಧನಲಕ್ಷ್ಮಿಯೇ ಬಾರಮ್ಮ ಬಡವನ ಮನೆಗೆ

ಹೂ, ಕುಂಕುಮ, ಗಂಧದಿಂದ ಅಲಂಕರಿಸುವೆ ಲಕ್ಷ್ಮಿ
ದೀಪ, ಧೂಪದಾರತಿಯನು ಮಾಡುವೆ ಸಿರಿಲಕ್ಷ್ಮಿ
ನನ್ನ ತನುಮನವ ಅರ್ಪಿಸುವೆ ತಾಯಿ ಅಷ್ಟಲಕ್ಷ್ಮಿ
ನಮ್ಮ ಮೇಲೆ ಕೃಪೆದೋರು ತಾಯಿ ಶ್ರೀ ಲಕ್ಷ್ಮಿ

ಭಕ್ತರಿಗೆ ಸಂತಾನ ಕರುಣಿಸುವ ಶ್ರೀ ಸಂತಾನಲಕ್ಷ್ಮಿ
ನಿನಗೆ ಮಣಿದವರಿಗೆ ನೀನು ಶ್ರೀ ವೈಭವಲಕ್ಷ್ಮಿ
ಬಡಭಕ್ತನನ್ನು ಶ್ರೀಮಂತನಾಗಿಸುವ ಶ್ರೀ ಧನಲಕ್ಷ್ಮಿ
ಬೇಡುವ ಭಕ್ತರ ಮನೆಯಲಿ ನೀ ಶ್ರೀಧಾನ್ಯಲಕ್ಷ್ಮಿ

ನನಗೆ ಶಕ್ತಿ, ಧೈರ್ಯವ ನೀಡು ಶ್ರೀಧೈರ್ಯಲಕ್ಷ್ಮಿ
ಭಾಗ್ಯವನು ಕರುಣಿಸು ತಾಯಿ, ಶ್ರೀಸೌಭಾಗ್ಯಲಕ್ಷ್ಮಿ
ಶಾಂತಿ-ನೆಮ್ಮದಿಯನು ನೀಡು ಶ್ರೀ ಗಜಲಕ್ಷ್ಮಿ
ನಿನ್ನ ಭಕ್ತನು ನಾನು ಕರುಣೆದೋರು ಶ್ರೀ ಮಹಾಲಕ್ಷ್ಮಿ

ಚಂದ್ರಚಕೋರಿ


ಆ ಶಶಿಕಳೆಯ ಮೊಗ ಹೊತ್ತ ಚಂದ್ರಚಕೋರಿ
ಈ ಜನ್ಮದಲಿ ನೀನೆ ನನ್ನ ಚಿತ್ತಚೋರಿ

ಇತ್ತೀಚೆಗೆ ಮನದಲಿ ಹಗಲಿರುಳು ನಿನ್ನ ಧ್ಯಾನ
ಒಮ್ಮೆ ನೋಡಿದರೆ ಸಾಕು, ನಿನ್ನ ಚೆಲುವಿನ ಆನನ
ಒಮ್ಮೆ ತಾಕುವುದು, ನನ್ನ ಹೃದಯಕ್ಕೆ ಪ್ರೇಮಕಂಪನ
ನನ್ನಲಿ ನಿನ್ನನು ನೋಡುವಾಸೆ, ಹೆಚ್ಚಾಗ್ತಿದೆ ದಿನದಿನ

ನಿನ್ನ ಕಣ್ಗಳೇ ಹೇಳುತ್ತಿವೆ ನೀನೆನ್ನ ಪ್ರೇಮಾಂಗಿನಿ
ನಿನ್ನ ಕಂಡು ಕ್ಷಣದಿಂದ ಭಾವಕೆ ನೀ ಅರ್ಧಾಂಗಿನಿ
ನಿನ್ನ ನೋಟದಿಂದ ಕದ್ದೆ ಈ ಹೃದಯ ತರಂಗಿಣಿ
ನಿನ್ನನ್ನೇ ಪ್ರೀತಿಸುವೆ, ನನ್ನ ಭಾವದ ಭಾವಾಂಗಿನಿ

ನಿನ್ನ ಅಪ್ಪಿಕೊಳ್ಳಲು, ಕಾಯುತ್ತಿದೆನ್ನ ಹರವಾದ ಎದೆ
ನನ್ನೀ ತನುವು ನಿನ್ನ ಸ್ಪರ್ಶಿಸಲು ಹಾತೊರೆದಿದೆ
ನಿನ್ನ ಪ್ರೀತಿ ಮಾತು ಕೇಳಲು ಈ ಮನ ಸಿದ್ದವಾಗಿದೆ
ಹೇ ಚಕೋರಿ, ನಿನ್ನ ಚೆಂದ ನನಗೆ ಮೆಚ್ಚುಗೆಯಾಗಿದೆ

ಪಟ್ಟಾಭಿಷೇಕ

ಇಂದು ಸಂಭ್ರಮದಿ ದುರ್ಗವಾಗುತಿದೆ ನಾಕ
ಸಡಗರದಿ ನಡೆದಿದೆ, ಮದಕರಿಯ ಪಟ್ಟಾಭಿಷೇಕ

ಹಸಿರು ಚಪ್ಪರ, ತಳಿರು ತೋರಣವ ಹಾಕಿ
ಪುಷ್ಪಾಲಂಕಾರದಿ ದುರ್ಗವಾಯ್ತು ನಂದನವನ
ಹೊಸಬಟ್ಟೆಯನ್ನುಟ್ಟು ಲಾವಣಿಯ ಹಾಡುತಲಿ
ನಲಿಯುತಿಹರು ಸಂತಸದಿ ದುರ್ಗದಾ ಜನ

ಬಗೆಬಗೆಯ ಬಣ್ಣದ ಸೀರೆ-ಕುಪ್ಪಸವ ತೊಟ್ಟು
ಬಂಗಾರದ ಒಡವೆಯಿಂದ ಮೈಯನ್ನಲಂಕರಿಸಿ
ಗರತಿಯರು ಆರತಿ ಬೆಳಗಿದರು ತಿಲಕವನ್ನಿಟ್ಟು
ಸಂಭ್ರಮಿಸಿದರು, ಮೆದಕೇರಣ್ಣಗೆ ಕೀರಿಟವ ತೊಡಿಸಿ

ರಾಜಗುರು ಮುರುಘಶ್ರೀಗಳ ಕೃಪಾಕಟಾಕ್ಷದಿ
ಮೆದಕೇರಣ್ಣ ರಾಜನಾದಾಗಿನ ಕ್ಷಣದ ಹರ್ಷ
ಬುರುಜು-ಬತೇರಿಗಳಲ್ಲಿ ಕಹಳೆಯನು ಊದಿ
ಮಾರ್ದನಿಸಿತು, ದುರ್ಗದ ಜನರ ಜಯಘೋಷ

ಬದುಕುವ ರೀತಿ

ಏಳು ಎದ್ದೇಳು, ಹೇ ಬಿಸಿರಕ್ತದ ಯುವಕ
ಎಂದೂ ಹಿಂದೇಟು ಹಾಕದೇ ಸಾಗಿಸು ಬದುಕ

'ಮನಸ್ಸಿದ್ದರೇ ಮಾರ್ಗ' ಎಂಬುದನು ತಿಳಿ ನೀನು
ಅತಿಯಾಸೆಯ ಸುಖಮಾರ್ಗವನು ಮರೆ ನೀನು
ಜೀವನವನ್ನೇ ಸವಾಲಾಗಿ ಪರಿಗಣಿಸು ನೀನು
ಹತ್ತು ಜನರಿಗೆ ಮಾದರಿಯಾಗಿ ಬಾಳು ನೀನು

ನಿನ್ನೊಳಗಿನ ಭಾವದಲಿ, ದುಡಿಯುವ ಛಲವಿರಲಿ
ನಿನ್ನಲಿ ಸ್ವಂತ ದುಡಿಮೆಗೆ ಎಂದೂ ಒಲವಿರಲಿ
ಚಟುವಟಿಕೆ ನಿನ್ನ ಮನದ ಜೀವಾಳವಾಗಿರಲಿ
ಹೀಗೆಂದಿಗೂ ಹರ್ಷದಿಂದ ಬಾಳು ಸಾಗುತಲಿರಲಿ

ಯಶಸ್ಸು ನಿನ್ನದಾಗಲು ನಿನ್ನಲಿ ಛಲವಿರಬೇಕು
ಛಲವೊಂದೆ ಅಲ್ಲದೇ, ಕಾರ್ಯತತ್ಪರನಾಗಬೇಕು
ಬಿಡದೇ ಪ್ರಯತ್ನ ಮಾಡಿ, ವಿಜಯಶಾಲಿಯಾಗಬೇಕು
ನಿನ್ನ ಬದುಕುವ ರೀತಿ ಅನುಸರಿಸುವಂತಿರಬೇಕು

ಮೈಸೂರು ದಸರಾ

ಕನ್ನಡನಾಡಲಿ ನಡೆಯುವ ಮೈಸೂರಿನ ದಸರಾ
ನೋಡಲು ಎರಡು ಕಣ್ಣು ಸಾಲದು, ನವರಾತ್ರಿ ಸಡಗರ
.
ಆ ದಿನಗಳಲಿ, ಪ್ರತಿದಿನಕ್ಕೂ ತನ್ನದೇ ಆದ ವಿಶಿಷ್ಟತೆ
ನವರಾತ್ರಿಯಲಿ ಮೈಸೂರು ಆಗುವುದು ಹರ್ಷದ ಸಂತೆ
ವಿಜಯದಶಮಿಯಂದು ಎಲ್ಲರಲ್ಲಿದೆ ಸಮನ್ವಯ ಸಮಾನತೆ
ಎಲ್ಲೆಡೆ ಕಾಣುವುದು ವಿಶ್ವಾಸವಿರಲಿ ಎನ್ನುವ ಆದರತೆ
.
ದಶಮಿಯಲಿ ದುರ್ಗಾಮಾತೆ ಏರುವಳು ಚಿನ್ನದ ಅಂಬಾರಿ
ನೋಡಲು ಚೆನ್ನ, ದುರ್ಗಿಯ ಆನೆ ಮೇಲಿನ ಸವಾರಿ
ಆ ಸಂಜೆಗಳಲ್ಲಿ ನಡೆವ ಸಾಂಸ್ಕೃತಿಕ ಕಾರ್ಯಕ್ರಮ ವೈಖರಿ
ಕಲಾದೇವಿಯ ಸಿರಿಯ ಕಂಡವಗೆ ಮೂಡುವುದು ಅಚ್ಚರಿ
.
ಮಹಾನವಮಿಯಂದು ಪೂಜೆ ನಡೆಯುವುದು ಆಯುಧಗಳಿಗೆ
ಮರೆಯಲಾಗುವುದು ಯಾರಿಗೂ, ಆ ಸಂತೋಷ ರಸಗಳಿಗೆ
ಮರುದಿನ ನೀಡಬೇಕು, ಶಮೀಪತ್ರವನು ಎಲ್ಲರಿಗೆ
ಪಾಲ್ಗೊಳ್ಳಲು ಪಾವತಿಸಬೇಕು 'ವಿಶ್ವಾಸ'ವೆಂಬ ತೆರಿಗೆ

ಸರ್ ಎಂ. ವಿಶ್ವೇಶ್ವರಯ್ಯ

ಪ್ರತಿದಿನವೂ ಸ್ಮರಿಸಲೇಬೇಕು, ನಿನ್ನ ಹೇ ಶತಾಯುಷಿ
ಕನ್ನಡಿಗನ ಮನದಾಳದಿ ನೆಲೆಸಿದ ನೀ ಧೀರ್ಷಾಯುಷಿ

ಮರೆಯಲಾಗದು ನಮಗೆ ನಿಮ್ಮ ಸೇವೆಯ ಸಾರ
ನಿಮ್ಮಲಿ ಕಾಣಬಹುದು ಸದ್ಗುಣಗಳ ಮಹಾಪೂರ
ಕನ್ನಡಿಗನಿದೆ ನಿಮ್ಮ ಮೇಲಿದೆ ಪ್ರೀತಿ ಅಪಾರ
ನಿಮ್ಮಿಂದ ಕಲಿಯಬೇಕು ಶಿಸ್ತು, ಕಾರ್ಯವೈಖರಿ ವಿಚಾರ

ಭರತಭೂಮಿಯ ಏಳಿಗೆಯ ಕಾರ್ಯಕರ್ತರು ನೀವು
ನಮ್ಮಂತ ಯುವಕರಿಗೆ ಸ್ಪೂರ್ತಿದಾಯಕರು ನೀವು
ಅಗಾಧ ಸ್ಮರಣಶಕ್ತಿಯ ಮಹಾಚೈತನ್ಯವೇ ನೀವು
ನಿಮ್ಮಂತೆ ಶಿಸ್ತನ್ನು ಪರಿಪಾಲಿಸುವೆವು ನಾವು

ಮೈಸೂರಿನ ದಿವಾನರಾದರೂ ನಿಮ್ಮಲಿ ಸ್ವಾರ್ಥವಿರಲಿಲ್ಲ
೧೦೦ ವರ್ಷ ದಾಟಿದರೂ ನಿಮ್ಮ ಜ್ಞಾನದಾಹ ಇಂಗಲಿಲ್ಲ
ನಿಮ್ಮನ್ನಗಲಿದ ದುಃಖ ಭಾರತಾಂಬೆಗೆ ತಡೆಯಾಗಲಿಲ್ಲ
ನಿಮ್ಮಲ್ಲಿಯ ಚೇತನವು ತುಂಬಲಿ, ಈ ಯುವಕರಿಗೆಲ್ಲ

ಸ್ವತಂತ್ರ ದಿನ



ಇದೇ ಆಗಸ್ಟ್ ೧೫ ರಂದು ಸ್ವತಂತ್ರ ದಿನ
ದೇಶದೆಲ್ಲೆಡೆ 'ವಂದೇ ಮಾತರಂ' ಎಂಬ ತಿಲ್ಲಾನ

ಭರತಭೂಮಿಯಲಿ ಅಂದು ಎಲ್ಲೆಲ್ಲೂ ಸಂತಸ
ಭಾರತೀಯನ ಆನಂದಕೆ ಸಾಲದೂ ಆ ಆಗಸ
ಜನ ಜಾತೀಯತೆ ಮರೆತು ಒಂದಾದರು ಈ ವರ್ಷ
ಒಂದಾಗಿಸಿತು, ಸ್ವತಂತ್ರ ದಿನಾಚರಣೆಯ ಹರುಷ

ಗಾಂದಿ, ನೆಹರೂ ಹಾಗೂ ಮತ್ತಿತರರ ವೇಷಭೂಷ
ನಮ್ಮ ಮಕ್ಕಳೆಲ್ಲ ಧರಿಸುವರು ಅವರಂತೆ ವೇಷ
ಸಭೆಯ ಮೇಲೆ ಊರಿನ ಗಣ್ಯರೆಲ್ಲ ಸೇರುವರು
ಶಾಲೆ ಮಕ್ಕಳು ದೇಶಗೀತೆಯನು ಹಾಡುವರು

ಅಂದು ಮೈದಾನದಲಿ, ಮಕ್ಕಳ ಮಾಸ್ಟ್ ಪಾಸ್ಟ್
ಆದರೆ ಅವರ ಹೊಟ್ಟೆಯಲ್ಲಿ ಇರಲ್ಲಿ ಬ್ರೇಕ್ ಫಾಸ್ಟ್
ನಾವುಗಳ ಕಾಪಾಡೋಣ ನಮ್ಮ ದೇಶದ ಶಿಸ್ತು
ಹರಸುವೆನು, ಇಂದು ಜನತೆಗಾಗಿ ಶುಭಮಸ್ತು

ಬನದ ಹೂಗಳು

ಎಲ್ಲರನು ಆಕರ್ಷಿಸುವ ಬಣ್ಣಬಣ್ಣದ ಹೂಗಳು
ನಾ ಒಲವಿನಿಂದ ಬೆಳೆಸಿದ ನನ್ನ ಬನದ ಹೂಗಳು

ರವಿ ಮೂಡಿರದ ನಸುಕಲಿ, ಅರಳಿದ ಹೂಮೊಗ್ಗುಗಳು
ಆ ಮೊಗ್ಗುಗಳ ನನ್ನ ಸತಿ ಬಿಡಿಸಿ ತರುವಳು
ಹಾರವನು ಮಾಡಿ, ಶಿವನ ಮುಡಿಗೆ ಏರಿಸುವಳು
ಮನೆ ಒಳಿತಿಗಾಗಿ ಶಿವನಿಗೆ ನಿತ್ಯ ನಮಿಸುವಳು

ಅದ್ಹೇಗೋ ಮೊಗ್ಗು, ಅರಳುವುದು ರವಿಕಿರಣ ತಾಕಿದಾಗ
ಅರಳಿದ ಗುಲಾಬಿಯನು ಹಿಡಿದು, ನನ್ನವಳು ಬಂದಾಗ
ಅದರಲ್ಲೊಂದನು ಅವಳ ಮುಡಿಗೆ ಮುಡಿಸುವೆ ನಾನಾಗ
ನವಚೈತನ್ಯ ಮೂಡುವುದು ನನ್ನಲಿ, ನಗುಮೊಗ ಕಂಡಾಗ

ನನ್ನ ಈ ಬನದ ಸಂಪಿಗೆ, ಮಲ್ಲಿಗೆ, ಕೇದಿಗೆ ಹೂ
ನನ್ನವಳು ಹೊತ್ತಿಗೊಂದರಂತೆ ಮುಡಿವಳು ಹೂ
ಅವಳ ಅಂದಕೆ ಮೆರೆಗು ಬರುವುದು ಮುಡಿದಾಗ ಹೂ
ಈ ಪರಿ ಇಷ್ಟವಾಯ್ತು ನನಗೆ ಈ ಬನದ ಹೂ

ಶ್ರೀರಾಮನ ರಾಮಾಯಣ

ಹೇ ದೇವಾ, ಶ್ರೀರಾಮ ನಿನ್ನಯ ರಾಮಾಯಣ
ಪುಣ್ಯ ಬರುವುದು, ನಿತ್ಯ ಮಾಡಿದರೆ ಪಾರಾಯಣ

ವಿಶ್ವಾಮಿತ್ರನ ಸಲಹೆಯಂತೆ ಆ ಗುರುವಿಗೆ ಶಿಷ್ಯನಾದೆ
ಅವನ ಮಾತಿನಂತೆ ತಾಟಕಾಸುರಿಯನು ಕೊಂದೆ
ನೀ ಜಟಾಧಾರಿಯಾಗಿ ವನರಮ್ಯತೆಯಲಿ ಮುಳುಗಿದೆ
ಶಿಕ್ಷಿತನಾಗಿ, ಅಯೋದ್ಯೆಗೆ ತಿರುಗಿ ಪಯಣ ಬೆಳೆಸಿದೆ

ಜನಕರಾಜನ ಶಿವಧನಸ್ಸನು ಎದೆಗೇರಿಸಿ ಮುರಿದೆ
ಜನಕಪುತ್ರಿ ಜಾನಕಿಯನ್ನು ನೀ ವಿವಾಹವಾದೆ
ಪತ್ನೀಸಮೇತ ರಾಜ್ಯಕ್ಕಾಗಮಿಸಿ ನೀ ಸಂತಸಗೈದೆ
ಕೆಲದಿನದ ನಂತರ ತಂದೆಯ ಕಠಿಣ ವಚನ ಪಾಲಿಸಿದೆ

ಲಕ್ಷ್ಮಣ ಹಾಗೂ ಸೀತಾಸಮೇತ ವನವಾಸಕ್ಕೆ ತೆರಳಿದೆ
ತಂದೆ ಸಾವು, ಸೀತಾಪಹರಣದಿಂದ ಬಹಳ ನೊಂದೆ
ವಾನರಸೇನೆ ಸಹಾಯದಿಂದ ಲಂಕೆಯ ರಾವಣನ ಕೊಂದೆ
ನಿನ್ನ ಈ ರಾಮಾಯಣ ಓದಿ ನಾನು ಪುನೀತನಾದೆ

ನಗು ಮೊಗದ ಮಗುವೇ


ಪುಟ್ಟ ಬಾಯಲಿ ಮುಗ್ದನಗು ನಗುವ ಮಗುವೇ
ನಿನ್ನಿಂದ ಕದ್ದದ್ದು, ಮತ್ತೇ ಸಿಗಲಾರದ ಸಂತಸವೇ

ನಿನ್ನೀ ನಗುವೇ ಈ ಮನಕೆ ಚಿನ್ನದ ಲೇಪನ
ನಿನ್ನಿಂದ ಪಡೆದ ಸಂತಸವು ಕಸ್ತೂರಿ ಚಂದನ
ಮುಗ್ಧತೆ ಬರಲೆಂದು ಬಯಸುವುದೀ ಭಾವನ
ಹುಟ್ಟುತ್ತಲೇ ಪರರಿಗೆ ಹಿತ ನೀಡಿದ ನಿನ್ನ ಜನ್ಮ ಪಾವನ

ಅರಿವಾಗದೇ ಮೂಡುವುದು ನಿನ್ನಲ್ಲಿ ಭಾವಸಿಂಚನ
ನಿಧಾನವಾಗಿ ಬೆಳೆಯಲಿ ಮಿಂಚಿನಂಥ ಚೇತನ
ಸದಾ ನಿನ್ನದಾಗಲೀ ಸದ್ಗುಣಗಳೇ ತುಂಬಿದ ಮನ
ಎಂದು ನಿನಗೆ ಹಾರೈಸುವುದು ನನ್ನ ಈ ಮನ

ಎಲ್ಲೆಲ್ಲಿಯೂ ನಿನಗೆ ಆಗದಿರಲಿ ಭಯದ ಕಂಪನ
ಬೇಗಬೇಗನೇ ಗ್ರಹಿಸು ನೀ, ಸರ್ವವಿದ್ಯಾಚಂದನ
ಸದಾ ನಿನ್ನ ಮನದಾಳದ ಬೇರಾಗಲಿ ಜ್ಞಾನಮಾಪನ
ನಿನಗೊಳಿತನು ಬಯಸಿ ನಾ ಬರೆವೆ ನೂರು ಕವನ

ನಾ ಕಂಡ ಕನಸು

ಪ್ರತಿ ಇರುಳಿನಲಿ ಮನದಲಿ, ನನ್ನವಳೇ ತುಂಬಿದ ಕನಸು
ಆ ಕನಸಿನಲ್ಲಿಯೇ, ಕಾಣುವೆ ನನ್ನವಳ ಸೊಗಸು

ಅವಳ ನಗೆಯ ಅಲೆಯರಾಗ ನನ್ನೆದೆಯ ಮೀಟುತಾ
ಹಾದುಹೋಗುವಳು ನನ್ನೆದೆ ಸುಖ ನೀಡುತಾ
ಪ್ರತಿಯೊಂದು ಭಂಗಿಯಲಿ ಚಿತ್ತಸಾಗರದಿ ತೇಲುತಾ
ನನ್ನ ಮನದ ಭಾವ ಕದ್ದಳು, ಅವಳು ನಸುನಗುತಾ

'ದುಂಬಿಯನ್ನರಸಿದ ಸುಮ'ದಂತೆ ಇರುವಳು ನನ್ನೆದೆಯಲಿ
ಹಾಲಲಿ ಬೆರೆತ ಜೇನಿನಂತೆ ಮಿಂದಳೆನ್ನ ಭಾವದಲಿ
ಇರುಳಲಿ ಗಂಧ ಚೆಲ್ಲುವ ಹೂವಾದಳು ಮನದಲಿ
ಕಾಲವ ದೂಡುತಿಹಳು ನನ್ನ ಪರವಾನಗಿ ಬೇಡುತಲಿ

ಬೇರೆ ಯೋಚನೆಯಿಲ್ಲವೆಂತು ಅವಳನ್ನೇ ತುಂಬಿದ ಮನಸು
ಕೇಳಿಸುವುದು 'ನಿನಗಾಗಿಯೇ ನಾನು' ಎನ್ನೋ ಗುಸುಗುಸು
ನಾ ಏನೂ ಹೇಳದಿದ್ದರೂ, ಅವಳಿಗಿಲ್ಲ ನನ್ನಲಿ ಮುನಿಸು
ಸದಾ ಹಿತವಾಗಿರುವುದು ನನಗೆ "ನಾ ಕಂಡ ಕನಸು"

ವಂದೇ ಮಾತರಂ

ಹೇ ಭಾರತೀಯ ಹೇಳು, ನೀ ವಂದೇ ಮಾತರಂ
ನಿನ್ನ ಕೊರಳ ದನಿಯಾಗಲಿ, ಈ ವಂದೇ ಮಾತರಂ

ತಾಯಿ ಭಾರತಾಂಬೆಗೆ ಕೈಮುಗಿಯೋಣ ನಾವು
ನಮ್ಮೀ ನೆಲದಲಿ ಶಾಂತಿಯ ಉಳಿಸೋಣ ನಾವು
ಸೋದರತೆ ಭಾವ ತಳೆದು, ಒಂದಾದೆವು ನಾವು
ಸತ್ಯ-ಅಹಿಂಸೆಗೆ ನಾವೆಂದೂ ಸೇವಕರಾಗಿರುವೆವು

ಯಾರೇ ಆಗಲಿ, ಹಿಂಸಾಕೃತ್ಯವೆಸಗುವವರ ಬಡಿವೆವು
ಅನಾಚಾರ, ಅತ್ಯಾಚಾರ ಮಾಡುವವರ ಜಡಿವೆವು
ನಾವುಗಳೇ ಸೇರಿ, ನಮ್ಮ ದೇಶವನು ಕಾಪಾಡುವೆವು
ಕೈಕೈ ಹಿಡಿದು, ನಾವು ವಂದೇ ಮಾತರಂ ಎನ್ನುವೆವು

ನಯವಂಚಕರ ನೆತ್ತರ ಕಾಲುವೆಯ ಹರಿಸುವೆವು
ಹಸಿವಿಗಾಗಿ ಹಸಿರ ಬೆಳಸಲು ಬೆವರು ಸುರಿವೆವು
ನಾವು ದೇಶಸೇವೆಯಲ್ಲಿ ಸುಖವ ಕಾಣುವೆವು
ರಾಷ್ಟ್ರಧ್ವಜವ ಹಿಡಿದು, "ವಂದೇ ಮಾತರಂ" ಎನ್ನುವೆವು

ಹೆತ್ತವಳು

ಹತ್ತು ದೇವರಿಗಿಂತ ಹೆಚ್ಚು, ನನ್ನ ಹೆತ್ತವಳು
ಬಂಧುಗಿಂತ ಹೆಚ್ಚು, ನನ್ನ ಹೊತ್ತು ಹೆತ್ತವಳು

ನಾ ಹೀಗೆ ಇರಬಯಸುವೆ ಅವಳ ಮಗನಾಗಿ
ಅವಳ ಮಮತೆಗೆ ನಾನಾದೆ ಮೂಗನಾಗಿ
ಇರುವೆ ಎಂದೂ ನನ್ನ ಹೆತ್ತವಳ ಸೇವಕನಾಗಿ
ಎಂದು ಬೇಡಿದೆ ಕಾಣದ ದೇವರ ದೀನನಾಗಿ

ಲೋಕಕ್ಕೆಲ್ಲಾ ಕಾಣುವ ನನ್ನೀ ತನುಮನವೆಲ್ಲಾ
ನವಮಾಸದಲಿ ನನಗೆ ಕೊಟ್ಟ ಕೊಡುಗೆ ಇದೆಲ್ಲಾ
ಎಂಥದ ಕಷ್ಟದ ಕಗ್ಗತ್ತಲಿನಲ್ಲೂ ನನ್ನ ಮರೆಯಲಿಲ್ಲಾ
ಈ ಉಡುಗೊರೆಯ ನಾನು ಮರೆಯುವುದಿಲ್ಲಾ

ಹಸುವಿನ ಕರು ಕೂಗುವುದು 'ಅಮ್ಮಾ' ಎಂದು
ಹಾರುವ ಹಕ್ಕಿಯ ಚಿಲಿಪಿಲಿ 'ಅಮ್ಮಾ' ಎಂದು
ಚಂಗನೆ ಹಾರುವ ಜಿಂಕೆಮರಿ ಕೂಗು 'ಅಮ್ಮಾ' ಎಂದು
ಸದಾ ನಾನೀಗಲೂ ಕೂಗುವೆ 'ಅಮ್ಮಾ' ಎಂದು

ಸರ್ವಾಂತರ್ಯಾಮಿ

ಭರತಭೂಮಿಯ ಕೀರ್ತಿ ಸರ್ವಾಂತರ್ಯಾಮಿ
ಆದರಿಂದು ಆಗುತಿದೆ ಮೋಸದ ಆವಾಂತರ್ಯಾಮಿ

ರಾಜಕಾರಣಿಗಳಿಗೆ ತಮ್ಮ ಸುಖದ ಹೊಸ್ತಿಲಲ್ಲಿ,
ತನ್ನ ಪ್ರಜೆಗಳ ಹಿತವೇ ಮರೆತುಹೋಯ್ತು.
ಈ ಭಾರಂತಾಂಬೆಯ ಹೊನ್ನ ಮಡಿಲಿನಲ್ಲಿ,
ಶಾಂತಿ-ಅಹಿಂಸಾ ತತ್ವವೇ ಮಾಯವಾಯ್ತು.

ಭರತಮಾತೆಗೆ, ಶಾಂತಿ ಇಲ್ಲದಂತಾಯ್ತು,
ಕಂಡು ಆ ದುರ್ಜನರ ದುರ್ವರ್ತನೆ.
ಮಾಡುವವರು ಯಾರು ಇಲ್ಲದಂತಾಯ್ತು,
ಅಂಥವರ ವಿರುದ್ಧ ಜೋರಾಗಿ ಸಿಂಹಘರ್ಜನೆ.

ಕ್ಷಣಕ್ಷಣಕೂ ಮುಚ್ಚುತಿದೆ ಭರತಮಾತೆಯ
ಮೊಗವನು, ಸರ್ವಭೀತಿಯ ಮುಸುಕು
ತಡೆಯಲಾಗದೇನು, ಆಗದಂತೆ ದೇಶಭ್ರಷ್ಟತೆಯ
ಇಲ್ಲದಂತಾಗಿಸಲು ಅಭದ್ರತೆಯ ಹುಳುಕು

ನಾಡ ಇತಿಹಾಸ


ಹೇ ಕೋಗಿಲೆ, ಹಾಡು ಬಾ ಕರುನಾಡ ಇತಿಹಾಸವನು
ನಿನ್ನಿಂದಲೇ ತಂದುಕೊಂಡೆ ನಾ ಸಂತಸವನು

ಚಿತ್ರದುರ್ಗದ ವೀರ ಮದಕರಿನಾಯಕನ ಕಥೆಯನು
ಬೇಲೂರು, ಹಳೆಬೀಡು, ಹಂಪಿಯ ವೈಭವವನು
ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮರ ಚರಿತೆಯನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

ಶಾರದೆಯ ಕಲಾಲೋಕ ಹಂಪಿಯ ಬಣ್ಣನೆಯನು
ವೀರತೆಗೆ ಹೆಸರಾದ, ದುರ್ಗಗಳ ಇತಿಹಾಸವನು
ಧೈರ್ಯಕ್ಕೆ ಸವಾಲಾದ ಕನ್ನಡಿಗನ ದಿಟ್ಟತೆಯನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರನು
ಉತ್ಸಾಹದ ನೆತ್ತರು ತುಂಬಿದ ಕನ್ನಡದ ಕಂದರನು
ಕನ್ನಡನಾಡಿನ ಗಂಡುಗಲಿಗಳ ವೀರೋತ್ಸಾಹವನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

ಸ್ವಾಗತ

ಸ್ವಾಗತವ ಕೋರುವೆ, ನನ್ನೊಲವಿನ ಅತಿಥಿಗೆ
ಕದವ ತೆರೆದೆವು, ನೀವು ಬರಲೆಂದು ಒಳಗೆ

ನಮಗೆ ಸಂತಸವ ಬಯಸಿ ನೀವು ಬರುವಾಗ
ನಿಮ್ಮಿಂದ ಸಂತಸವ ಈ ಮನ ಹೊರುವಾಗ
ಬಾಂಧವ್ಯದ ಮಿಂಚು ಹೊಳೆಯಲಿ ಬಹುಬೇಗ
ಸುಖಕ್ಷಣವು ಬರಲೆಂದು ಹರಸುವೆ ನಿಮಗೀಗ

ನಿಮ್ಮ ಮನದಲಿ ಸ್ಮಿತವಾರಿಧಿಯೇ ಹರಿಯಲಿ
ಆ ನಿಮ್ಮ ನಗುವಿನಲಿ, ಮಧುರತೆ ತುಂಬಿರಲಿ
ನೆನಪಿನಂಗಳದಲಿ ನಮ್ಮ ಛಾಯೆ ಉಳಿಯಲಿ
ನಮ್ಮೀ ಬಾಂಧವ್ಯದ ಕನಸು ಚೆಂದವಾಗಿರಲಿ

ನಿಮ್ಮನೇ ಕಾಯುವುದು ನನ್ನೀ ಕಮಲನಯನ
ನಿಮ್ಮಿಂದ ನನ್ನ ಮನಸಿಗೊಂದು ನವಚೇತನ
ಯಾವ ಕಲ್ಮಶವಿರದೇ ಪರಿಶುದ್ಧವಿರಲಿ ಭಾವನ
ಶುಭವಾಗಲಿ ಎಂದು ಹರಸುವುದು ನನ್ನ ಮನ

ಯುಗಾದಿ


ಓ ಗೆಳೆಯಾ, ನೂತನ ಸಂವತ್ಸರದ ಬುನಾದಿ
ಕೋಗಿಲೆ ಗಾನದಿ, ಹರುಷ ತಂದಿದೆ ಯುಗಾದಿ

ಹಸಿರ ಬನದಲಿ ಸಂತಸದಿ ಕುಣಿಯುತಾ
ರವಿಯ ಹೊನ್ನಬೆಳಕಿನಲಿ ಆನಂದದಿ ತೇಲುತಾ
ಮೈಮರೆತೆ ನಾ, ಪ್ರೇಮತರಂಗವ ಮೀಟುತಾ
ಬೇವು-ಬೆಲ್ಲ ಹಂಚೋಣ, ಯುಗಾದಿ ಆಚರಿಸುತಾ

ನೋವೆಲ್ಲಾ ಮರೆವ, ಸಂತಸದ ಹಾದಿಯಲಿ
ಸಂತಸದಿ, ಹಳೆಯ ನೆನಪು ಹಳಸದಿರಲಿ
ಸುಖ-ಸಂತೋಷವನ್ನೇ ಯುಗಾದಿ ತರಲಿ
ಚೈತ್ರದತ್ತ ಹೆಜ್ಜೆಯಿಡುವೆ ನಿಮಗೆ ಹಾರೈಸುತಲಿ

ಮನದಿ ಹರುಷದ ವಾರಿಧಿ ಹರಿಯುತಲಿರಲಿ
ಸುಖ-ಸಂತೋಷದ ರಸನಿಮಿಷ ಕಾದಿರಲಿ
'ಹರುಷ'ವೆಂಬ ಉಡುಗೊರೆ ಕೊಡುವೆನಿಲ್ಲಿ
ಉಡುಗೊರೆಯನು, ನಿಮ್ಮ ಮನ ಸದ್ದಿಲ್ಲದೇ ಸ್ವೀಕರಿಸಲಿ

ನಿಸರ್ಗ


ನೋಡು ಬಾ ಪ್ರವಾಸಿಗ, ಈ ಪರಿಸರ
ಎಂದು ಕೈಬಿಸಿ ಕರೆಯುತಿಹನು ಆ ನೇಸರ

ಆ ಹಕ್ಕಿಯು ಅಲ್ಲಿ ಹಾರುತಿದೆ
ಹಾಗೆಯೇ... ಆ ಮುಗಿಲು ಸೇರುತಿದೆ
ಆಗಸಕೆ ಚುಂಬನವನು ನೀಡುತಿದೆ
ಚಿಲಿಪಿಲಿ ಎಂಬ ರವವನು ಹರಡುತಿದೆ

ಜುಳುಜುಳು ಎಂದು ಸದ್ದು ಮಾಡುತ
ಬಂದಳು ಗಂಗೆ, ಜೋರಾಗಿ ಹರಿಯುತ
ಆ ನೀರಲ್ಲಿ ನಿಂತರೇ, ತಣ್ಣಗೆ ಕೊರೆಯುತ
ಇದೆಲ್ಲಾ ಕಾಣಲು ನನ್ನ ಮನಸಿಗೆ ಹಿತ

ಅಗೋ ಅಲ್ಲಿ ಕಾಣುವ ಆ ಹಸಿರು
ನೀಡುವುದು ನಮಗೆ ಬೇಕಾದ ಉಸಿರು
ಉಳಿಸು ನೀ, ನಿನ್ನ ಮುಂದಿರುವ ಹಸಿರು
ಗಳಿಸುವಿಯಂತೆ ಇದಾದ ನಂತರ ಹೆಸರು

ಸತ್ಯ ಹರಿಶ್ಚಂದ್ರ


ಹೋಗುತಿದೆ ನೋಡು, ಈ ಊರಿನ ಬೆಳಕು
ನಮಗೆಲ್ಲ ಈಗ ಬರೀ ದುಃಖದ ಮೆಲುಕು

ಈ ಊರಿನ ಬೆಳಕು ನಮ್ಮೀ ಹರಿಶ್ಚಂದ್ರ ನೃಪನು
ಕೊಟ್ಟ ಮಾತಿಗೆಂದೂ ಇವನು ತಪ್ಪಲಾರನು
ಉಸಿರ ತೊರೆದರೂ ಸತ್ಯಕ್ಕಾಗಿ ಮರುಜನಿಸುವನು
ಸತ್ಯವನು ಬಿಟ್ಟು ಅರೆಕ್ಷಣ ಬದುಕಲಾರನು

ವಿಶ್ವಾಮಿತ್ರನ ಮಾಯಾಜಾಲಕೆ ಸಿಲುಕಿ
ಪುರದ ಜನರ ನೋವನ್ನು ತನ್ನಲ್ಲೇ ಹುದುಕಿ
ನೋವಿನಿಂದಲಿ ನಮ್ಮ ಹೃದಯವ ಕಲಕಿ
ಹೇಗೆ ಆರಿಸುವನೋ ಕಾಣೆ, ಕಷ್ಟವೆಂಬ ಬೆಂಕಿ

ಸಾಲದ ಪಾವತಿಗೆ ಮಗನನ್ನು ಮಾರಿದನು
ಸತಿ ಹಾಗೂ ತನ್ನನು ತಾನೇ ಮಾರಿಕೊಂಡನು
ಜೀವನ ನಡೆಸಲು ಮಸಣವನು ಕಾಯುವನು
ಸತ್ಯದಾವಿಷ್ಕಾರಕ್ಕಾಗಿ ಸತಿಯ ಕಡಿಯಲೆತ್ನಿಸಿದನು

ಕಷ್ಟ


ಬಾಳೊಂದು ಸುಂದರ ಕೇದಿಗೆ ಹೂವಂತೆ
ಮನುಜಗೆ ಬದುಕಿನ ಮರ್ಮ ತಿಳಿಯದಂತೆ

ಸಂಪಿಗೆ ಹೂವಂತೆ ನಿಮ್ಮ ಬದುಕು
ಅರಿತಾಗ ಬಾಳಲ್ಲಿ ಬರುವುದು ಹೊಸಬೆಳಕು
ಮರೆತಾಗ ಆಗುವುದು ತುಂಬಾ ಕೆಡುಕು
ಆಗಬೇಕು ಇಲ್ಲಿ, ನಿಮ್ಮ ಬುದ್ದಿ ಚುರುಕು

ಬರೀ ಮುಳ್ಳು ತುಂಬಿದ ಹೂವಾದರೂ
ನಿಮ್ಮ ಬಾಳಲಿ ಕಷ್ಟವೇ ತುಂಬಿದ್ದರೂ
ಕಷ್ಟಗಳಿಗೆ ನೀನು ಎಂದೂ ಅಳುಕದಿರು
ನೀನೆಂದಿಗೂ ತುಂಬಾ ಧೈರ್ಯವಾಗಿರು

ಬರಲಿಲ್ಲವೇನು ಆ ಶ್ರೀರಾಮನಿಗೂ ಕಷ್ಟ
ಕಷ್ಟಕೆ ಮನುಜನು ಎಂದಿಗೂ ಕನಿಷ್ಟ
ಭಕ್ತರ ತಿರಿದು ನೋಡುವುದವಗೆ ಇಷ್ಟ
ಕಷ್ಟವನು ಮರೆತು ಬದುಕಿದರೇನು ನಷ್ಟ

ಚಿನ್ನದ ಬೀಡು


ಜಯವಾಗಲಿ, ಜಯವಾಗಲಿ ನಮ್ಮ ಕನ್ನಡಾಂಬೆಗೆ
ಕರವೆತ್ತಿ ಮುಗಿಯುವೆವು ಈ ಕನ್ನಡ ಮಾತೆಗೆ

ವೀರರುಗಳೇ ಜನಿಸಿರುವ ವೀರನಾಡಿದು
ಕವಿಗಳೇ ತುಂಬಿದ ಚೆಲುವ ಬೀಡಿದು
ಈ ಯಕ್ಷಗಾನವು ಕನ್ನಡನಾಡ ಕಲೆಯಿದು
ಎಲ್ಲೆಲ್ಲೂ ನೋಡು, ಸ್ನೇಹವೇ ತುಂಬಿಹುದು

ಕನ್ನಡಿಗನು ತಾನು ಎಲ್ಲಾದರೂ ಇರಲಿ
ಅವನು ತಾನು ಹೇಗಾದರೂ ಬದುಕಿರಲಿ
ಅವನ ಬಾಳಲಿ ಸಂತೋಷವು ತುಂಬಿರಲಿ
ಅವನ ಎದೆಯಲಿ ಕನ್ನಡದ ಲತೆಯಿರಲಿ

ಈ ನಮ್ಮ ಕನ್ನಡನಾಡೇ, ಚಿನ್ನದ ಬೀಡು
ಸುಂದರ ತಾಣವೇ ಬೇಲೂರು ಹಳೇಬೀಡು
ಪಶ್ಚಿಮ ಘಟ್ಟದಲಿ ತುಂಬಿದೆ ಹಸಿರುಕಾಡು
ಕನ್ನಡಾಂಬೆಗೆ ಒಲಿವ ಕಾಯಕವ ನೀ ಮಾಡು

ಬದುಕು

ಹೇ ಗೆಳೆಯರೇ ಕೇಳಿರಿ ನೀವು ಇಲ್ಲಿ
ಛಲ ತೊಟ್ಟು ಬಾಳುವುದನು ಕಲಿಯಿರಿ ಇನ್ನಿಲ್ಲಿ

ಛಲವಿರದ ಬದುಕೇ ಕೊಳಕಾದ ಬದುಕು
ಇರಬಾರದು ಮನದಲಿ ತುಂಬಾ ಸಿಡುಕು
ಸಿಡುಕಿದ್ದರೇ ಮನವಾಗುವುದು ಹರಕುಮುರಕು
ನನಸಾಗಲಿ ನಿಮ್ಮ ಕನಸಿನ ಭವ್ಯ ಬದುಕು

ಕನಸೆಂಬ ಅಲೆ ಮೇಲೆ ನಿಮ್ಮ ಬಾಳು ಸಾಗಲಿ
ಕನಸಿನ ಪ್ರತಿಬಿಂಬ ಮೂಡಲಿ ಆ ಅಲೆಯಲಿ
ನಿಮ್ಮ ಬಾಳಲಿ ಎಂದೂ ಸಂತೋಷವು ಇರಲಿ
ಹೊಸ ಹೂ ಚಿಗುರಲಿ ನಿಮ್ಮ ಬಾಳಲತೆಯಲಿ

ಆಸೆಯಿಂದ ನಿಮ್ಮ ಬದುಕು ಗುರಿ ಸೇರಲಿ
ಆ ನಿಮ್ಮ ಕಣ್ಗಳು ಭವಿಷ್ಯದ ಕನಸು ಕಾಣಲಿ
ನಿಮ್ಮಲ್ಲಿ ಛಲವೆಂಬುದು ತಾನಾಗಿಯೇ ಮೂಡಲಿ
ನಿಮ್ಮ ತುಟಿಯಲಿ ಬತ್ತಲಾರದ ನಗುವಿರಲಿ

Monday, September 29, 2008

ಕರ್ನಾಟಕ


ವಂದನೆ, ಅಭಿನಂದನೆ ಹೇ ಕಲಾರಸಿಕ
ನೀ ನೆಲೆಸಿದ ತಾಣವಿದುವೇ ಕರ್ನಾಟಕ

ಚೆಲುವ ಕನ್ನಡನಾಡಿನ ಸುಂದರ ಪರಿಸರ
ಕನ್ನಡಿಗರ ತುಂಬು ಹೃದಯದ ಆದರ
ಯಕ್ಷಗಾನ, ಗೊಂಬೆಯಾಟವನು ನೋಡಿರಾ
ಕರುನಾಡ ಕಲೆಯಿದು ನನ್ನಣ್ಣಗಳಿರಾ

ವಚನ ಸಾಹಿತ್ಯ, ಜನಪದ ಸಾಹಿತ್ಯ
ಮಕ್ಕಳ ಸಾಹಿತ್ಯ, ಇನ್ನೂ ಅತ್ಯಂತ್ಯ
ಮಾಮರ-ಕೋಗಿಲೆ ಸಂಬಂಧ ರೀತ್ಯಾ
ಕನ್ನಡ ಸಾಹಿತ್ಯಕ್ಕಿಲ್ಲ ಎಂದೂ ಅಂತ್ಯ

ಆದಿಕವಿ ರನ್ನ, ಪಂಪ, ರಾಘವಾಂಕ
ಇವರ ಕಾವ್ಯದಲ್ಲಿ ಇರುವ ರೂಪಕ
ಅದರ ಅರ್ಥವೇ ಮೈ ರೋಮಾಂಚಕ
ಕನ್ನಡಿಗನೇ ಸೌಂದರ್ಯದ ಮೊದಲ ಅರ್ಚಕ

ಕೋಗಿಲೆ ನೆನಪು...


ನನಗೆ ಕಾಡುತಿದೆ ಆ ಕೋಗಿಲೆಯ ನೆನಪು
ಮರೆಯಲಾಗದದರ ಕಣ್ಣಂಚಿನ ಹೊಳಪು

ಆ ಕೋಗಿಲೆಯ ಮಧುರ ನೆನಪು ನನ್ನಲಿದೆ
ಅದಕ್ಕಾಗಿ ಹಾಡುವ ಆಸೆ ನನ್ನ ಕಣ್ಣಲಿದೆ
ಕೋಗಿಲೆಯ ಮಧುರರಾಗ ಈ ಕಿವಿಯಲ್ಲಿದೆ
ಆ ಕೋಗಿಲೆ ಮಾತ್ರ ನನ್ನ ಕನಸಿನಲ್ಲಿದೆ

ಮತ್ತೇ ಕೇಳಬೇಕಿತ್ತು, ಆ ಕೋಗಿಲೆಯ ರಾಗ
ನಾ ಕರೆದೆ, ಆ ಕೋಗಿಲೆ ಹಾರಿಹೋಗುವಾಗ
ಸಂತಸವು ಅದಕೆ, ಸಂಗಾತಿ ಜೊತೆ ಸೇರಿದಾಗ
ಮಾಮರ ತರುವ ಚೈತ್ರವು ಬರುವುದೇ ಬೇಗ

ಹಗಲಲಿ ಕೋಪದಿ ಉರಿವ ಆ ನೇಸರ
ಇರುಳಲಿ ಧರೆಯ ಬೆಳಗುವ ಈ ಚಂದಿರ
ಅವಕ್ಕೆ ನಿಧಾನವಾಗಿ ದಿನಗಳೆಯುವದೇ ಸಡಗರ
ಅದೇಕೆ ಇವರಿಗೆ, ನನ್ನ ಮೇಲೆ ಮತ್ಸರ

ಪ್ರೇಮದಾ ಓಲೆ...!


ಚೆಲುವೆ, ನಿನ್ನ ಬೆಳ್ಳಿ ಮನಸಿನ ಮೇಲೆ
ನಾ ಬರೆಯುತಲಿರುವೆ ಪ್ರೇಮದಾ ಓಲೆ...

ನಾ ಅರಿತೆನು ಅವಳ ಮನವನು
ಕಾತರಿಸಿದೆ ಮನ, ಸೇರಲು ಆ ತನು
ಮುದಗೊಂಡಿದೆ ಮನ, ಕಂಡಾಗವಳನು
ಮತಿಗೆ ಮತ್ತೇರಿತು, ಕಂಡು ಆ ಚೆಲುವನು

ಪ್ರೇಮಪತ್ರವ ಬರೆದೆ ನಾ, ಆ ಚೆಲುವೆಗೆ
ನೋಟದ ಲೇಖನಿಯಲಿ, ಅದು ಹೀಗೆ:
"ಪ್ರೇಮಾಮೃತವ ನೀಡುವೆನು ಬಾಲೆಗೆ
ಮನ ನಲಿದಿದೆ, ಒಲಿದು ಆ ಮುಗುಳ್ನಗೆಗೆ

ಮನದ ಸಾಗರದಿ ಈಜುವ ಮೀನು ನೀನು
ಕಾದು ಒಣಗಿದೆ ತುಟಿ, ಹೀರಲು ಆ ಜೇನು
ಹೃದಯದಲಿ ಅರಳಿದ ಮಂದಾರವು ನೀನು
ನಿನ್ನಂತರಂಗವನು ಬಯಸುವೆ ನಾನು

ನನ್ನ ನಲ್ಲೆ


ಅವಳ ಮುಡಿಗೆ ಮುಡಿಸಿದೆ ನಾ ಮೊಲ್ಲೆ
ಅದಕೆ ನಸುನಾಚಿ ನೀರಾದಳು ನನ್ನ ನಲ್ಲೆ

ನನ್ನ ಬೆನ್ನಹಿಂದೆ ನಡೆದು ಬಂದವಳು ಇವಳು
ನನ್ನ ಮನಕೆ ಪ್ರೇಮಗಂಧ ಪೂಸಿದಳು ಇವಳು
ನನ್ನ ಕನಸಿನ ರಾಣಿಯಾದವಳು ಇವಳು
ನನ್ನ ಮುದ್ದುಮಕ್ಕಳ ತಾಯಿಯಾದಳಿವಳು

ನೂರು ಚಿಂತೆ ಮಾಯವಾಯ್ತು ಇವಳನು ಕಂಡಾಗ
ಮನ ನಕ್ಕುನಲಿಯುವುದು ಅವಳು ನಗುವಾಗ
ಎಂದಿಗೂ ಸಿಗಲಿ ಅವಳೆನ್ನ ಸತಿಯಾಗುವ ಯೋಗ
ಭಾಗ್ಯವಂತನು ನಾನು ಎನಿಸುತಿದೆ ರಮಿಸುವಾಗ

ಮೊದಲ ಸಾರಿ ಕಂಡಾಗ ನಿಂತಿದ್ದಳು ತಲೆಬಾಗಿ
ಮೊದಲ ರಾತ್ರಿ ಕಂಡಿದ್ದಳು, ಬಲು ಚೆಲುವಾಗಿ
ಇಂದಿಗೂ ನಾ ಬದುಕಿರುವೆ ಅವಳ ಪ್ರೇಮಿಯಾಗಿ
ಜನ್ಮಜನ್ಮದಲಿ ಸಿಗಲಿ ಅವಳೆನ್ನ ಸತಿಯಾಗಿ

Sunday, September 28, 2008

ಕರುನಾಡು

ಕನ್ನಡ ತಾಯಿಯ ಮಕ್ಕಳು ನಾವು
ಈ ಸುಂದರ ಸ್ವರ್ಗದ ಸುಖಿಗಳು ನಾವು

ಕರುನಾಡ ನೆಲದಲಿ ಎಲ್ಲೆಡೆಯೂ ಹಸಿರು
ಕನ್ನಡಿಗನ ನಾಸಿಕದಲ್ಲಿದೆ ಪ್ರೀತಿಯ ಉಸಿರು
ಕಲೆ, ಸಾಹಿತ್ಯ, ದೈವಭಕ್ತಿಗಿದು ತವರೂರು
ಪ್ರತಿಯೊಂದು ಕ್ಷೇತ್ರದಲಿ ಗಳಿಸಿದೆ ಹೆಸರು

ಇಲ್ಲಿರುವುದು ಹಸಿರು ತುಂಬಿದ ಕಾಡು
ಸಿಡಿಲಿಗೂ ಹೆದರದ ಕನ್ನಡಿಗರ ಬೀಡು
ಗಂಧದಗುಡಿಯಾಗಿದೆ ನಮ್ಮೀ ಕರುನಾಡು
ಸೌಂದರ್ಯದ ನಾಕವು ಇಲ್ಲಿದೆ ನೋಡು

ಹಸುಗೂಸಿನ ಮೊದಲ ಮಾತು ಕನ್ನಡ
ಮುದಿಮುತ್ಸದಿಯ ಕೊನೆಮಾತು ಕನ್ನಡ
ವಿಶ್ವದಲ್ಲೇ ಚೆಲುವ ಭಾಷೆ ನಮ್ಮ ಈ ಕನ್ನಡ
ಕವಿವರ್ಯನ ಒಲವಿನ ಭಾಷೆಯೂ ಕನ್ನಡ

ಪ್ರೇಮದಾ ಜಿಂಕೆ

ಚಂಗನೆ ಹಾರುತಿದೆ ಅದು ಸಂಸಾರದ ಬನಕೆ
ಎಲ್ಲರನು ಸೆಳೆದಿದೆ ಈ ಪ್ರೇಮದಾ ಜಿಂಕೆ

ತರುಣಿಯರು ನಿಬ್ಬೆರಗಾದರು ಅದರ ನೋಟದಿಂದ
ಬೇಡರು ಚಕಿತರಾದರು ಅದರ ಓಟದಿಂದ
ಮಕ್ಕಳು ನಲಿದಾಡಿದರು ಕಂಡು ಅದರ ನಲಿವಿನಿಂದ
ಸರ್ವರು ಮನಸೂರೆಗೊಂಡರು ಆ ಹೊಂಬಣ್ಣದಿಂದ

ಈ ಪ್ರೇಮವೆಂಬ ಜಿಂಕೆಯ ಹಿಂದೆ ನೀನಿರು
ದ್ವೇಷವೆಂಬ ಹೆಬ್ಬುಲಿಯಿಂದ ನೀ ದೂರವಿರು
'ಪ್ರೀತಿ-ಪ್ರೇಮದಿಂದಲೇ ಪ್ರಪಂಚ'ವೆಂದು ಸಾರು
ದ್ವೇಷವ ಮರೆತು ಕಾಣು ನೀ ಪ್ರೀತಿಯ ಕಾರುಬಾರು

ದ್ವೇಷದಿಂದಲೇ ಮನಕೆ ಸಾವಿರಾರು ವೇದನ
ಪ್ರೀತಿಯಿಂದ ನಾ ಕಂಡುಕೊಂಡೆ ನಲಿವ ಜೀವನ
ಎಲ್ಲರನು ಪ್ರೀತಿಸುತಲಿ ಕಾಣು ನೀ ನಂದನ
ದ್ವೇಷವೆಂಬುದೇ ವೇದನ, ಪ್ರೇಮವೆಂಬುದೇ ಚಂದನ

Thursday, September 25, 2008

Introduction

Hi... Friends......

I am Raghavendra. from Challakere, of Chitradurga District. I designed website www.chitharadurga.com which contains the whole information about our chitradurga district in our regional language and mother tongue Kannada.

And I introduce my new collection of poems which is... "BANADA HOOGALU" .... i.e.,

Please read following poems, give your comments... I await for ur response....

thanking You..
R RAGHAVENDRA
Challakere - 577522
www.chitharadurga.com